ಮಾಜಿ ಶಾಸಕರ ವಿರುದ್ಧದ ರಿಯಲ್ ಎಸ್ಟೇಟ್ ಆರೋಪ ಸತ್ಯಕ್ಕೆ ದೂರ : ಎಂ.ಆರ್.ಜಗನ್ನಾಥ್ ಪ್ರತಿಕ್ರಿಯೆ

ಮಾಜಿ ಶಾಸಕರ ವಿರುದ್ಧದ ರಿಯಲ್ ಎಸ್ಟೇಟ್ ಆರೋಪ ಸತ್ಯಕ್ಕೆ ದೂರ : ಎಂ.ಆರ್.ಜಗನ್ನಾಥ್ ಪ್ರತಿಕ್ರಿಯೆ

ಮಧುಗಿರಿ: ಮಧುಗಿರಿಯ ಮಾಜಿ ಶಾಸಕರಾದ ಎಂ.ವಿ.ವೀರಭದ್ರಯ್ಯ ಅವರು ರೈತರ ಜಮೀನನ್ನು ಅಗ್ರಿಮೆಂಟ್ ಮಾಡಿಕೊಂಡು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ ಎಂದು ಎಂ.ಎಲ್.ರಾಜೇಂದ್ರ ಮಾಡಿರುವ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾದುದು ಎಂದು ಮಾಜಿ ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್ ತಿರುಗೇಟು ನೀಡಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆಯೇ ಹೊರತು ಮಾಜಿ ಶಾಸಕರು ಯಾವುದೇ ಅಗ್ರಿಮೆಂಟ್ ಮಾಡಿಕೊಂಡಿಲ್ಲ. ಎಂಎಲ್‌ಸಿ ಅವರು ಹೇಳುತ್ತಿರುವುದು ಸುಳ್ಳು. ಮಾಜಿ ಶಾಸಕರು ಜಮೀನು ಅಗ್ರಿಮೆಂಟ್ ಮಾಡಿಕೊಂಡು ರಿಯಲ್ ಎಸ್ಟೇಟ್ ಮಾಡಿರುವ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಮೊದಲು ಅದನ್ನು ಪ್ರದರ್ಶಿಸಲಿ" ಎಂದು ತಿಳಿಸಿದ್ದಾರೆ

.ರೈತರ ಅತಂತ್ರ ಸ್ಥಿತಿ:ಪರಿಹಾರಕ್ಕೆ ಆಗ್ರಹ

ತಾಲ್ಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ್ದು, ರೈತರು ಕಷ್ಟದಲ್ಲಿದ್ದಾರೆ. 5 ವರ್ಷಗಳ ಹಿಂದೆ ಸರ್ಕಾರವು ಬೆಲ್ಲದಮೋಡಗು ಮತ್ತು ಡಿ.ವಿ.ಹಳ್ಳಿ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ರೈತರ 380 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ, ಇಲ್ಲಿಯವರೆಗೆ ರೈತರಿಗೆ ಯಾವುದೇ ಸರಿಯಾದ ಪರಿಹಾರ ಧನ ನೀಡಿಲ್ಲ. ಇದರಿಂದಾಗಿ ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡಲೂ ಆಗದೆ, ತಮ್ಮ ಕಷ್ಟ-ಕಾರ್ಪಣ್ಯಗಳನ್ನು ತೀರಿಸಿಕೊಳ್ಳಲು ಬ್ಯಾಂಕ್‌ಗಳಿಂದ ಸಾಲ ಪಡೆಯಲೂ ಸಾಧ್ಯವಾಗದೆ ಅತಂತ್ರ ಸ್ಥಿತಿಗೆ ತಲುಪಿದ್ದಾರೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು

**ಮನವಿ:** 
ಈಗಲಾದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಶಾಸಕ ಕೆ.ಎನ್. ರಾಜಣ್ಣ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರುಗಳು ವಿಶೇಷ ಮುತುವರ್ಜಿ ವಹಿಸಬೇಕು. ಈ ಭಾಗದ ಸಂತ್ರಸ್ತ ರೈತರಿಗೆ ತಕ್ಷಣವೇ ಸೂಕ್ತವಾದ ಪರಿಹಾರ ಕೊಡಿಸಬೇಕು ಅಥವಾ ಅವರ ಜಮೀನನ್ನು ರೈತರಿಗೇ ಬಿಟ್ಟುಕೊಡಬೇಕೆಂದು ಸುದ್ದಿಗೋಷ್ಠಿಯ ಮೂಲಕ ಜಗನ್ನಾಥ್ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡ ಆರ್.ಎ.ನಾರಾಯಣ್,  ರೈತರುಗಳಾದ ವೆಂಕಟೇಶ್,  ಮಹೇಶ್  ಇದ್ದರು.